ಇಸ್ಮಾಯೀಲ್
	(ಹೀಬ್ರೂ-ಇಷ್ಮೇಅಲ್). ಹಳೆ ಒಡಂಬಡಿಕೆಯ ಪ್ರಕಾರ ಏಬ್ರಹಾಂನ (ಇಬ್ರಾಹೀಂ) ಹಿರಿಯ ಮಗ. ತಾಯಿ ಹೆಗರ್, ಈಜಿಪ್ಷಿಯನ್ ದಾಸಿ. ಏಬ್ರಹಾಂನ ಮೊದಲ ಪತ್ನಿ ಸಾರಾ ಅಸೂಯೆಯಿಂದ ನೀರಿಲ್ಲದ ಸ್ಥಳದಲ್ಲಿ ಬಿಡುವಂತೆ ನೌಕರರಿಗೆ ನಿರ್ದೇಶಿಸಿ ತಾಯಿಮಗನನ್ನು ಮನೆಯಿಂದ ಹೊರಗಟ್ಟುತ್ತಾಳೆ. ನೌಕರರು ಅವರನ್ನು ಅರೇಬಿಯಾದಲ್ಲಿ ತಂದು ಬಿಡುತ್ತಾರೆ. ನೀರಿಗಾಗಿ ಪರದಾಡುವಾಗ ಇಸ್ಮಾಯೀಲನ ಕಾಲಿನ ಬಳಿ ಚಿಲುಮೆಯೊಂದು ಚಿಮ್ಮುತ್ತದೆ. ಅದೇ ಇಂದಿನ ಜಂಜಂ ಚಿಲುಮೆ. ಅವರಿದ್ದ ಸ್ಥಳವೇ ಮುಂದೆ ಮೆಕ್ಕಾ ಪಟ್ಟಣವಾಗಿ ಬೆಳೆಯಿತು. ಅನಂತರ ಇಸ್ಮಾಯೀಲ್ ಅರಬ್ಬೀಯರ ಮೂಲಪುರುಷನೆಂದೂ ಒಬ್ಬ ಪ್ರವಾದಿಯೆಂದೂ ಪ್ರಖ್ಯಾತನಾದ. ಚಿಕ್ಕವನಿದ್ದಾಗ, ಏಬ್ರಹಾಂನ ಕನಸಿನಲ್ಲಿ ದೇವರು ಅವನ ಮೆಚ್ಚಿನ ವಸ್ತುವನ್ನು ಬಲಿ ಕೇಳಿದನಂತೆ. ಅದರಂತೆ ಏಬ್ರಹಾಂ ತನ್ನ ಮೆಚ್ಚಿನ ಮಗ ಇಸ್ಮಾಯೀಲನನ್ನೇ ಬಲಿ ಕೊಡಲು ಸಿದ್ಧನಾದ. ಭಕ್ತಿಗೆ ಮೆಚ್ಚಿ ದೇವರು ಬಲಿಸ್ಥಾನದಲ್ಲಿ ಇಸ್ಮಾಯೀಲನ ಬದಲಾಗಿ ಒಂದು ಕುರಿಯನ್ನು ತಂದಿಟ್ಟ. ಏಬ್ರಹಾಂ ಅದನ್ನೇ ಬಲಿ ಕೊಟ್ಟ. ಇದನ್ನೇ ಸಂಕೇತವಾಗಿಟ್ಟುಕೊಂಡು ಮುಂದೆ ಮುಸಲ್ಮಾನರಲ್ಲಿ ಬಕ್ರೀದ್ ಹಬ್ಬ ಬೆಳೆದು ಅಂದು ಕುರಿ, ಒಂಟೆಗಳನ್ನು ಬಲಿಕೊಡುವ ಸಂಪ್ರದಾಯ ಬೆಳೆದು ಬಂತು. ಏಬ್ರಹಾಂ ಮತ್ತು ಇಸ್ಮಾಯೀಲ್ ಮೆಕ್ಕಾದಲ್ಲಿರುವ ಪವಿತ್ರ ಕಾಬಾವನ್ನು (ಕಪ್ಪು ಕಲ್ಲಿನ ಕಟ್ಟಡ) ಕಟ್ಟಿದರು. ಇದರ ದಿಕ್ಕಿನಲ್ಲಿಯೇ ಜಗತ್ತಿನ ಎಲ್ಲ ಮುಸಲ್ಮಾನರೂ ನಮಾಜನ್ನು ಮಾಡುವುದು.
(ಎಸ್.ಎ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ